ಮುಂಡರಗಿ
	ಕರ್ನಾಟಕದ ರಾಜ್ಯದ ಗದಗ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಮುಖ್ಯಸ್ಥಳ. ಈ ತಾಲ್ಲೂಕನ್ನು ಪಶ್ಚಿಮ ಮತ್ತು ವಾಯವ್ಯದಲ್ಲಿ ಗದಗ ತಾಲ್ಲೂಕು, ನೈಋತ್ಯ ಮತ್ತು ಪಶ್ಚಿಮದಲ್ಲಿ ಶಿರಹಟ್ಟಿ ತಾಲ್ಲೂಕು. ಪೂರ್ವದಲ್ಲಿ ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳು ಸುತ್ತುವರಿದಿವೆ. ತಾಲ್ಲೂಕಿನ ವಿಸ್ತೀರ್ಣ 877.4 ಚ.ಕಿಮೀ. ಗ್ರಾಮಗಳು 32. ಜನಸಂಖ್ಯೆ 92,644 (2001).

	ಈ ತಾಲ್ಲೂಕಿನ ದಕ್ಷಿಣ ಮತ್ತು ನೈಋತ್ಯದಲ್ಲಿ ತುಂಗಭದ್ರಾನದಿ ಮುಂಡರಗಿ ತಾಲ್ಲೂಕಿನ ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕಿಸುತ್ತದೆ. ಗದಗ ತಾಲ್ಲೂಕಿನಿಂದ ಮುಂದುವರಿದು ಹರಿಯುವ ಹಿರೇಹಳ್ಳ ಈ ತಾಲ್ಲೂಕಿನ ಮಧ್ಯದಲ್ಲಿ ಉತ್ತರದಿಂದ ದಕ್ಷಿಣಕ್ಕೆ ಹರಿದು ತುಂಗಭದ್ರಾವನ್ನು ಕೂಡಿಕೊಳ್ಳುತ್ತದೆ. ಇದು ಮಳೆಗಾಲದಲ್ಲಿ ತುಂಬಿ ಹರಿದು ಬೇಸಗೆಯಲ್ಲಿ ಬತ್ತುವುದುಂಟು. ವಾರ್ಷಿಕ ಸರಾಸರಿ ಮಳೆ 470 ಮಿಮೀ. ತಾಲ್ಲೂಕಿನಲ್ಲಿ ಕೆಂಪುಮಿಶ್ರಿತ ಕಪ್ಪುಮಣ್ಣಿನ ಭೂಮಿ ವಿಶೇಷವಾಗಿದೆ. ಖುಷ್ಕಿ ವ್ಯವಸಾಯ ಹೆಚ್ಚು. ಬಾವಿ, ಹಳ್ಳ ತೊರೆಗಳಿಂದ ವ್ಯವಸಾಯಕ್ಕೆ ನೀರನ್ನು ಒದಗಿಸಿಕೊಳ್ಳುವುದುಂಟು. ಜೋಳ, ದ್ವಿದಳಧಾನ್ಯಗಳು, ಮೆಣಸಿನಕಾಯಿ, ಸೇಂಗಾ, ಹತ್ತಿ, ಗೋದಿ ಮತ್ತು ತರಕಾರಿಗಳನ್ನು ಬೆಳೆಸುತ್ತಾರೆ. ಈ ತಾಲ್ಲೂಕಿಗೆ ಮೋಟರುವಾಹನಗಳ ಸಂಪರ್ಕ ಉಂಟು. ಈ ತಾಲ್ಲೂಕಿನಲ್ಲಿ ಅಂಚೆ, ತಂತಿ, ಶಾಲೆಗಳ ಮತ್ತು ವೈದ್ಯಕೀಯ ಸೌಲಭ್ಯವುಂಟು.

	ಈ ತಾಲ್ಲೂಕಿನ ಕೆಲವು ಪ್ರಮುಖ ಗ್ರಾಮಗಳಲ್ಲಿ ಕೊರಲಹಳ್ಳಿ ಒಂದು. ಇದು ತುಂಗಭದ್ರಾ ನದಿಯ ಎಡದಂಡೆಯ ಮೇಲಿದ್ದು ಮುಂಡರಗಿಗೆ ದಕ್ಷಿಣದಲ್ಲಿ 10 ಕಿಮೀ ದೂರದಲ್ಲಿದೆ. ಇಲ್ಲಿ ಹಿಂದೆ ತುಂಗಭದ್ರಾನದಿಗೆ ಕಟ್ಟಿದ್ದ ಒಡ್ಡಿನ ಅವಶೇಷವಿದೆ. ಡಂಬಳ ಗ್ರಾಮ ಇತಿಹಾಸ ಪ್ರಸಿದ್ಧಸ್ಥಳ, ಮುಂಡರಿಗಿಗೆ 26 ಕಿಮೀ ದೂರದಲ್ಲಿರುವ ಗುಮ್ಮಗೋಳದಲ್ಲಿ ಬಸವಣ್ಣ ದೇವಾಲಯವಿದ್ದು ಇಲ್ಲಿ ಚೈತ್ರದಲ್ಲಿ ಜಾತ್ರೆ ನಡೆಯುತ್ತದೆ. ಹಳ್ಳಿಕೇರಿ, ಹೆಸರೂರು, ಬಾಗೇವಾಡಿ, ಬಿದರಹಳ್ಳಿ-ಇವು ತಾಲ್ಲೂಕಿನಲ್ಲಿ ಅಭಿವೃದ್ಧಿ ಹೊಂದುತ್ತಿರುವ ಗ್ರಾಮಗಳು.

	ಮುಂಡರಗಿ ಈ ತಾಲ್ಲೂಕಿನ ಮುಖ್ಯ ಕೇಂದ್ರ. ಗದಗ ನಗರಕ್ಕೆ ಆಗ್ನೇಯದಲ್ಲಿ 38 ಕಿಮೀ ದೂರದಲ್ಲಿದೆ. ಜನಸಂಖ್ಯೆ 20,318 (2001). ಈ ಊರು ಗದಗ-ಬಳ್ಳಾರಿ ರಸ್ತೆಯಲ್ಲಿರುವುದಲ್ಲದೆ ಕೊಪ್ಪಳ, ಬೆಲತ್ತಿ ಮೊದಲಾದ ಊರುಗಳೊಡನೆ ಮಾರ್ಗ ಸಂಪರ್ಕವನ್ನು ಹೊಂದಿದೆ. ಇಲ್ಲಿ ಸೇಂಗಾವ್ಯಾಪಾರ ವಿಶೇಷವಾಗಿದೆ: ಹತ್ತಿ ಮತ್ತು ಮಾಧ್ಯಮಿಕ ಶಾಲೆಗಳಿವೆ.

	ಈ ಊರಿನ ಸಮೀಪದ ಕಲ್ಲುಗುಡ್ಡದ ಮೇಲೆ ಒಂದು ಕೋಟೆ ಇದೆ. 1857ರ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಭೀಮರಾಯ ಇಲ್ಲಿಯವನು (ನೋಡಿ- ಮುಂಡರಗಿ-ಭೀಮರಾವ್). ಊರಿಗೆ ಹತ್ತಿರವಿರುವ ದಿಣ್ಣೆಯ ಮೇಲೆ ಕನಕನರಸಿಂಹ ದೇವಾಲಯವಿದೆ. ಪ್ರತಿ ವರ್ಷ ಫಾಲ್ಗುಣದಲ್ಲಿ ಜಾತ್ರೆ ನಡೆಯುತ್ತದೆ. ಎರಡು ಅನ್ನದಾನೇಶ್ವರ ಮಠಗಳು ಇಲ್ಲಿವೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ